
ಕಳಸ ಲೈವ್ ವರದಿ
ಇಲ್ಲಿನ ಸುಪ್ರಸಿದ್ಧ ಶ್ರೀ ಕಲಶೇಶ್ವರ ದೇವಸ್ಥಾನದ ಪರಿವಾರ ದೇವರಾದ ಕಾಲಬೈರವೇಶ್ವರ ದೇವಸ್ಥಾನದ ಮುಂಭಾಗ ವಾಮಾಚಾರ ಸದೃಶ್ಯ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಶಿಷ್ಠ ತೀರ್ಥಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಕಾಲಬೈರವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಸ್ತೆಗೆ ಅಡ್ಡಲಾಗಿ ದೊಡ್ಡ ಕಲ್ಲುಗಳನ್ನು ಜೋಡಿಸಿ ಇಡಲಾಗಿದ್ದು, ಅವುಗಳಿಗೆ ಅರಿಶಿನ-ಕುಂಕುಮ ಬಳಿಯಲಾಗಿದೆ. ಅಲ್ಲದೆ, ಸ್ಥಳದಲ್ಲಿ ಕುಂಬಳಕಾಯಿಯನ್ನು ಕಡಿದಿರುವ ಕುರುಹುಗಳು ಪತ್ತೆಯಾಗಿದ್ದು, ಇದು ಉದ್ದೇಶಪೂರ್ವಕವಾಗಿ ನಡೆದ ವಾಮಾಚಾರದ ಕೃತ್ಯವಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ದೇವಸ್ಥಾನದ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಹಾಗೂ ಹತ್ತಿರದಲ್ಲೇ ಹಲವಾರು ಮನೆಗಳಿವೆ. ಜನವಸತಿ ಇರುವ ಪ್ರದೇಶದಲ್ಲೇ ತಡರಾತ್ರಿ ಇಂತಹ ನಿಗೂಢ ಕೃತ್ಯ ನಡೆದಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಯುಗಾದಿ ಹಬ್ಬದ ಮುನ್ನಾದಿನದಂದು ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷವೂ ಇದೇ ದೇವಸ್ಥಾನದಲ್ಲಿ ಕಳ್ಳತನದಂತಹ ಅಹಿತಕರ ಘಟನೆಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಗ್ರಾಮಸ್ಥರು ಹಿಂದೆಯೇ ಒತ್ತಾಯಿಸಿದ್ದರು. ಆದರೆ, ಈವರೆಗೆ ಸಂಬAಧಪಟ್ಟವರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
“ನಮ್ಮೂರಿನ ಪವಿತ್ರ ಕ್ಷೇತ್ರವೊಂದರ ಮುಂಭಾಗ ಈ ರೀತಿ ಅನಿಷ್ಠ ಪದ್ಧತಿಗಳು ಕಂಡುಬರುತ್ತಿರುವುದು ಭಯ ಹುಟ್ಟಿಸುತ್ತಿದೆ. ಕೂಡಲೇ ಪೊಲೀಸರು ಹಾಗೂ ಅಧಿಕಾರಿಗಳು ಗಮನಹರಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು,” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ
