ಕಳಸ ಲೈವ್ ವರದಿ
ಕಳಸ ಶ್ರೀ ಕಲಶೇಶ್ವರ ದೇವರ ಅಷ್ಠಬಂಧ ಕುಂಭಾಭಿಷೇಕ ಜೂನ್ 7,8,9 ರಂದು ನಡೆಯಲಿದೆ.

ಈ ಬಗ್ಗೆ ಶನಿವಾರ ಕಲಶೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ತೀರ್ಮನಿಸಲಾಗಿದೆ.ಈ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮೇ 11 ರಂದು ಹೊರನಾಡಿನಲ್ಲಿ ನಡೆದ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ ಅಂಗವಾಗಿ ಶ್ರೀ ಜಗನ್ಮಾತೆಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಅಂದು ಬೆಳಿಗ್ಗೆ ಕಲಶೇಶ್ವರ ದೇವಸ್ಥಾನಕ್ಕೂ ಬೇಟಿ ನೀಡಿದ್ದರು.ಆ ಸಂದರ್ಭದಲ್ಲಿ ಕಲಶೇಶ್ವರನ ಅಷ್ಠಬಂದ ಅತೀ ಶೀಘ್ರವಾಗಿ ಆಗಬೇಕು ಎಂದು ಅವರು ತಿಳಿಸಿದ್ದಾರೆ.ಧಾರ್ಮಿಕತೆಗೆ ಸಂಭಂದಿಸಿದ ವಿಚಾರ ಆಗಿರುವುದಿಂದ ಅತ್ಯಂತ ಶೀಘ್ರವಾಗಿ ಅಷ್ಠಬಂಧ ಮಾಡುವುದು ಒಳಿತು ಎಂದು ಸಭೆಗೆ ಮಾಹಿತಿ ನೀಡಿದರು.

ಅದರಂತೆ ಜೂನ್ ತಿಂಗಳ 7,8,9 ರಂದು ಅಷ್ಠಬಂಧ ಕುಂಭಾಭಿಷೇಕ ಮಾಡಲು ತೀರ್ಮಾಣ ಮಾಡಲಾಗಿದೆ.ಕಲಶೇಶ್ವರ ದೇವರ ಜೊತೆಗೆ ಸರ್ವಾಂಗ ಸುಂದರಿ, ಆನೆ ಗಣಪತಿ, ಗಿರಿಜಾಂಭ ದೇವದ ಅಷ್ಠ ಬಂಧವೂ ನಡೆಯಲಿದೆ.ಇದರ ಸಂಪೂರ್ಣ ಮಾಹಿತಿಯನ್ನು ಮೇ 29 ರ ಸೋಮವಾರ ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆಯನ್ನು ಕರೆಯಲಾಗಿದ್ದು ಆ ಸಭೆಯಲ್ಲಿ ಮಾಹಿತಿಯನ್ನು ನೀಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನ ಕಾರ್ಯನಿರ್ವಹಕ ಅಧಿಕಾರಿ ಪ್ರೇಮಲತಾ, ಕೆ.ಕೆ.ಬಾಲಕೃಷ್ಣ ಭಟ್, ರಂಗನಾಥ್, ರಾಜೇಂದ್ರ ಪ್ರಸಾದ್, ಕೆ.ಎ.ಶ್ರೇಣಿಕ,ಕಾರ್ತಿಕ್ ಶಾಸ್ತ್ರೀ ಇತರರು ಇದ್ದರು.

