

ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮುಜೆಕಾನು ಗ್ರಾಮದಿಂದ ಕಳಸಕ್ಕೆ ಬರುತ್ತಿದ್ದ ಕೃಷಿಕರೊಬ್ಬರಿಗೆ ಕಾಡುಕೋಣ ಇರಿದು ಗಂಭೀರ ಗಾಯಗಳಾಗಿವೆ.
ಮುಜೆಕಾನು ಗ್ರಾಮದ ಮರಿಗೌಡ(60) ಎಂಬುವವರು ಗಾಯವಾದ ವ್ಯಕ್ತಿ.
ಮರಿಗೌಡ ಶನಿವಾರ ಕಳಸಕ್ಕೆ ಬರುವ ದಾರಿಯ ಕರ್ನಾಳಿ ಸಮೀಪ ಅವರಿಗೆ ಕಾಡುಕೋಣ ಕಂಡು ಬಂದಿದೆ. ಕೋಣದ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ.
ಅಲ್ಲಿಗೆ ಕೋಣ ಬಂದು ಮರಿಗೌಡ ಅವರ ಎದೆಗೆ ಕೋಡಿನಿಂದ ಇರಿದು ದೂರಕ್ಕೆ ಎಸೆದಿದೆ.ಇದರಿಂದ ತೀವ್ರವಾಗಿ ರಕ್ತಸ್ರಾವ ಆಗಿದ್ದ ಮರಿಗೌಡ ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರು. ಸಮೀಪದಲ್ಲಿ ಇದ್ದ ಸ್ಥಳೀಯರು ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆತಂದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಗಳೂರಿಗೆ ಕರೆದೊಯ್ಯಲಾಗಿದೆ. ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ.ಗಾಯದ ತೀವ್ರತೆಗೆ ಹೃದಯವು ಹೊರಗೆ ಕಾಣುತ್ತಿತ್ತು.
ಕಳಸ ತಾಲ್ಲೂಕಿನಾಧ್ಯಂತ ಕಾಡು ಪ್ರಾಣಿಗಳಾದ ಕಾಡು ಕೋಣಗಳ ಹಾವಳಿ ಅತೀ ಹೆಚ್ಚಾಗಿದ್ದು, ಕೃಷಿಕರು ತೋಟದೊಳಗೆ ಹೋಗಲು ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿಂದೆ ತಾಲ್ಲೂಕಿನಲ್ಲಿ ಕಾಡುಕೋಣ ತಿವಿದು ಒಬ್ಬರು ಸಾವನ್ನಪ್ಪಿದ್ದಾರೆ.ಅಲ್ಲದೆ ಹಲವರಿಗೆ ಕಾಡುಕೋಣ ತಿವಿದು ಗಾಯವನ್ನು ಮಾಡಿದೆ.ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಂದ ಕೃಷಿಕರಿಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


