ಕಳಸ ಲೈವ್ ವರದಿ
ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಠೀಕಿಸುವವರು ಆ ಭಾಗ್ಯಗಳನ್ನು ತ್ಯಜಿಸಲಿ ಎಂದು ಕೆಪಿಸಿಸಿ ಸದಸ್ಯ ಕೆ.ಆರ್ ಪ್ರಭಾಕರ್ ಹೇಳಿದರು.
ಪಕ್ಷದ ಕಛೇರಿಯಲ್ಲಿ ಕಾಂಗ್ರೆಸ್ ಲೋಕ ಸಭಾ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು ಯಾರು ಬಿಟ್ಟಿ ಭಾಗ್ಯ ಅನ್ನುತ್ತಾರೋ ಅವರೆ ಆ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಅದೆಷ್ಟೋ ಕುಟುಂಬಗಳು ಇಂದು ಜೀವನವನ್ನು ನಿರ್ವಹಿಸುತ್ತಿವೆ.ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಒಂದು ಕುಟುಂಬಕ್ಕೆ ವಾರ್ಷಿಕ 50 ಸಾವಿರ ಸಿಗುತ್ತಿದೆ. ಬಿಜೆಪಿ ಅವರ ಅಭ್ಯರ್ಥಿ ಮೇಲೆ ಮತ ಕೇಳುತ್ತಿಲ್ಲ, ಮೋದಿಗೆ ಮತ ಕೇಳುತ್ತಿದ್ದಾರೆ. ನಾವು ರಾಜ್ಯ ಸರ್ಕಾರ ಕೊಟ್ಟ ಗ್ಯಾರಂಟಿಯ ಸಫಲತೆಯ ಮೇಲೆ ಮತ್ತು ನಮ್ಮ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದು ಹೇಳಿದರು.
ಮಾಜಿ ತಾ.ಪಂ ಸದಸ್ಯ ರಾಜೇಂದ್ರ ಹಿತ್ಲುಮಕ್ಕಿ ಮಾತನಾಡಿ ಲೋಕ ಸಭಾ ಚುನಾವಣೆಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದ್ದು, ಇದರಲ್ಲಿ ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ ಮೊದಲ ಉದ್ಯೋಗದ ಗ್ಯಾರಂಟಿ 1 ಲಕ್ಷ ವೇತನ, ಬಡ ಕುಟುಂಬದ ಮಹಿಳೆಗೆ ಪ್ರತಿ ವರ್ಷ 1ಲಕ್ಷ, ನರೇಗಾ ಸೇರಿದಂತೆ ರಾಷ್ಟ್ರೀಯ ಕನಿಷ್ಠ ವೇತನ ದಿನಕ್ಕೆ 400 ರೂ, ಸಾಲಮನ್ನಾ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜಾತಿಗಣತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಾಜಿ ತಾಪಂ ಸದಸ್ಯ ಮಹಮ್ಮದ್ ರಫೀಕ್ ಮಾತನಾಡಿ ಹಿಂದಿನ ಬಾರಿ ಚುನಾವಣಾ ಬಹಿμÁ್ಕರದ ಘೋಷಣೆ ಆಗಿದ್ದ ಹೇರಡಿಕೆ, ಆಳಗೋಡು, ಮುಜೆಕಾನು, ಹಂದಿಹಡ್ಲು, ಕಂಚಿನಕೆರೆ, ಬಲಿಗೆ ಪ್ರದೇಶದ ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಮಾತನಾಡಿ ಈ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರು ಅಲ್ಪಾವಧಿ ಸಂಸದರಾಗಿದ್ದರೂ ಕೂಡ ಅವರು ಮಾಡಿದ ಉತ್ತಮ ಕೆಲಸದಿಂದ ಅತೀ ಹೆಚ್ಚಿನ ಮತಗಳಿಂದ ಜಯಗಳಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಪಂಚಾಯಿತಿ ಸದಸ್ಯ ವೀರೇಂದ್ರ, ಗಣೇಶ್ ಭಟ್, ಸಂಶುದ್ದೀನ್ ಇದ್ದರು.
