ಕಳಸ ಲೈವ್ ವರದಿ
ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ಕೊಡುವ ಸಹಕಾರ ರತ್ನ ಪ್ರಶಸ್ತಿಗೆ ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಕೆ.ಮಂಜಪ್ಪಯ್ಯ ಅವರು ಬಾಜನರಾಗಿದ್ದಾರೆ.
ಪ್ರತೀ ವರ್ಷ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನೀಡುವ ಈ ಪ್ರಶಸ್ತಿಗೆ ಈ ಬಾರಿ 72 ಜನರು ಆಯ್ಕೆ ಆಗಿದ್ದು ಚಿಕ್ಕಮಗಳೂರು ಜಿಲ್ಲೆಯಿಂದ ಮಂಜಪ್ಪಯ್ಯ ಸಹಿತ ಇಬ್ಬರು ಆಯ್ಕೆ ಆಗಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಚಳವಳಿಯ ಬೆಳವಣಿಗೆಗೆ ಮಂಜಪ್ಪಯ್ಯ ಸಲ್ಲಿಸಿರುವ ಕೊಡುಗೆ ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಮಹಾ ಮಂಡಳ ತಿಳಿಸಿದೆ.
ಇದೇ 17ರಂದು ಬಾಗಲಕೋಟೆಯಲ್ಲಿ ನಡೆಯುವ ಅಖಿಲ ಭಾರತ 71ನೇ ಸಹಕಾರ ಸಪ್ತಾಹದ ಸಮಾರಂಭದಲ್ಲಿ ಜಿ.ಕೆ.ಮಂಜಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಳಸ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ 25 ವರ್ಷಗಳಿಂದ ಅಧ್ಯಕ್ಷರಾಗಿ ಮಂಜಪ್ಪಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
25 ವರ್ಷದ ಹಿಂದೆ ಸಣ್ಣ ಮೊತ್ತದ ವಹಿವಾಟು ನಡೆಸುತ್ತಿದ್ದ ಈ ಸಂಘ ಈಗ ವಾರ್ಷಿಕ 500 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಕ್ಯಾಂಪೆÇ್ಕೀ ಸಂಸ್ಥೆ ಸಹಯೋಗದಲ್ಲಿ ಬೆಳೆಗಾರರಿಂದ ಅಡಿಕೆ ಮತ್ತು ಕಾಳುಮೆಣಸು ಖರೀದಿ ಮಾಡುತ್ತಿದೆ.
ಕಾಫಿ ಸಂಸ್ಕರಣೆ ಮತ್ತು ಅಡಿಕೆ ಸಂಸ್ಕರಣೆಗೆಂದು ಕಳೆದ ವರ್ಷ ಕಳಸ ಸಹಕಾರ ಸಂಘ 18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಘಟಕವನ್ನೂ ಸ್ಥಾಪಿಸಿದೆ.ಕೃಷಿಕರಿಗೆ ಬೇಕಾದ ಎಲ್ಲ ವಸ್ತುಗಳನ್ನು ಒಂದೇ ಸೂರಿನಲ್ಲಿ ಮಾರಾಟ ಮಾಡುತ್ತಿದೆ.ಕೋಟ್ಯಾಂತರ ರೂಪಾಯಿ ಬೆಳೆಸಾಲ ಕೂಡ ಕೊಡುತ್ತಿದೆ.

