
ಕಳಸ ಲೈವ್ ವರದಿ
ಸ್ವಾಮಿ ವಿವೇಕಾನಂದರು ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸುವ ಸನ್ಯಾಸಿಯಲ್ಲ. ಅವರು ಜಗತ್ತಿನ ಸಮಸ್ತ ಜನರೂ ಸಾಮರಸ್ಯದಿಂದ ಬದುಕ ಬಹುದಾದ ವಿಶ್ವಧರ್ಮದ ಪ್ರತಿಪಾದಕರು.ಅವರ ವಿಚಾರಗಳು ಪ್ರಸ್ತುತ ಭಾರತದ ಧಾರ್ಮಿಕ ಧ್ರುವೀಕರಣದ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ ಎಂದು ವಕೀಲರಾದ ಕುಮಾರ್ ಮುರೊಳ್ಳಿ ಅಭಿಪ್ರಾಯಪಟ್ಟರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ಉದ್ಯೋಗ ಮತ್ತು ಮಾಹಿತಿ ಮಾರ್ಗದರ್ಶನ ಕೋಶ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸಾಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವನಿಧಿ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷರಾದ ರಾಜೇಂದ್ರ ಹೆಬ್ಬಾರ್ ಹಿತ್ಲುಮಕ್ಕಿ ಮಾತನಾಡಿ ಸ್ವಾಮಿ ವಿವೇಕಾನಂದರು ನಮ್ಮ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಬರುವ ಮುಂಚೆಯೇ ಜನರಲ್ಲಿ ಭಾರತೀಯತೆಯ ಭಾವನೆಯನ್ನು ಜಾಗ್ರತಗೊಳಿಸಲು ಶ್ರಮಿಸಿದ ಧೀಮಂತರು. ಇಂದಿನ ವಿದ್ಯಾರ್ಥಿಗಳು ಅವರಿಂದ ಸ್ಪೂರ್ತಿ ಪಡೆದು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಚಿಕ್ಕಮಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ವಹಿಸಿದ್ದರು. ಕಳಸ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಗಣೇಶ್ ಭಟ್, ಯೂತ್ ಎಂಪ್ಲಾಯೆಬಿಲಿಟಿ ಸ್ಕಿಲ್ಸ್ ಸೆಂಟರ್ ಚಿಕ್ಕಮಗಳೂರು ಡಿಇಓ ಪೂರ್ಣಚಂದ್ರಅರಸ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಸುಜಿತ್ಜೈನ್, ಯುವ ರೆಡ್ಕ್ರಾಸ್ ಘಟಕ ಸಂಚಾಲಕ ಸೋಮಶೇಖರ ಸಿ.ಎನ್, ರಾ.ಸೇಯೋ ಕಾರ್ಯಕ್ರಮಾಧಿಕಾರಿ ವಿಶುಕುಮಾರ್ಎನ್, ರೋವರ್ಸ್ ಘಟಕ ಸಂಚಾಲಕ ಡಾ.ಪುನೀತ್ಕುಮಾರ್.ಆರ್., ರೇಂಜರ್ಸ್ಘಟದ ಸಂಚಾಲಕಿ ನಿವೇದಿತಾಎನ್., ಆಂತರಿಕಗುಣಮಟ್ಟ ಭರವಸಾ ಕೋಶ ಸಂಚಾಲಕ ಡಾ. ಆದಿತ್ಯ ಉಪಸ್ಥಿತರಿದ್ದರು.