ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃಧ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಂದಾಯ ಉಪವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.
ಜನವರಿ ಒಂದರನ್ನು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಎಸ್. ಕಲ್ಪನರವರು ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ಎನ್. ತೇಜಸ್ ಕುಮಾರ್ ಎಂಬ ಎ.ಸಿ. ದರ್ಜೆಯ ಅಧಿಕಾರಿಯನ್ನು ಕಳಸ ತಾಲ್ಲೂಕು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನ ಕರ್ನಾಟಕ ಕೈಗಾರಿಕೆ ಅಭಿವೃಧ್ಧಿ ನಿಗಮದಲ್ಲಿ ಕೆ.ಎ.ಎಸ್. ಕಿರಿಯ ಶ್ರೇಣಿ ಅಧಿಕಾರಿಯಾಗಿರುವ ಎನ್. ತೇಜಸ್ ಕುಮಾರ್ ರವರಿಗೆ ತಾಲ್ಲೂಕು ಉಸ್ತುವಾರಿ ನೀಡಲಾಗಿದೆ.
ಈ ಉಸ್ತುವಾರಿ ಅಧಿಕಾರಿಯವರು ಕಳಸಕ್ಕೆ ಆಗಾಗ್ಗೆ ಭೇಟಿ ನೀಡಿ, ಸರ್ಕಾರದ ಅಧಿಸೂಚನೆಯಲ್ಲಿ ಸೂಚಿಸಿದ ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ. ಪ್ರಮುಖ ಕೆಲಸಗಳೆಂದರೆ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ಪರಿಶೀಲನೆ ನಡೆಸುವುದು, ಎಸ್.ಸಿ./ಎಸ್ಟಿ./ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವಸತಿ ನಿಯಲಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸುವುದು, ಶಾಲೆ, ಕಾಲೇಜು, ಐಟಿಐ ಸಂಸ್ಥೆಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವುದು, ಶಾಲಾ ಕಟ್ಟಡ ದುರಸ್ಥಿ, ಹೊಸ ಕಟ್ಟಡ ನಿರ್ಮಾಣ ಇತ್ಯಾದಿ ಕಾಮಗಾರಿಗಳ ಪರಿಶೀಲನೆ ನಡೆಸುವುದು, ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗಳಿಗೆ ನಿವೇಶನವನ್ನು ಒದಗಿಸುವ ಬಗ್ಗೆ ಪರಿಶೀಲನೆ, ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸುವುದು, ತಾಲ್ಲೂಕಿನಲ್ಲಿರುವ ಅಪೌಷ್ಟಿಕ ಮಕ್ಕಳನ್ನು ಗುರ್ತಿಸಿ, ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳುವುದು, ಕುಡಿಯುವ ನೀರು, ರಸ್ತೆಗಳು, ವಿದ್ಯುತ್, ಮೇವು ಲಭ್ಯತೆ, ಬೀಜ ಮತ್ತು ರಸಗೊಬ್ಬರ, ಬಿಸಿಯೂಟ, ನರೇಗಾ ಇನ್ನಿತರೆ ಕಾಮಗಾರಿಗಳ ಭೌತಿಕ ಪ್ರಗತಿ ಪರಿಶೀಲನೆ ನಡೆಸುವುದು.
ಅಂತೆಯೇ ತಾಲ್ಲೂಕಿನ ಯುವಕರಿಗೆ ಉದ್ಯೋಗಾಧಾರಿಯತ ತರಬೇತಿ ಕುರಿತು ಸಮನ್ವಯ ಸಾಧಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು, ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಗುರ್ತಿಸಿ, ಅವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು, ತಾಲ್ಲೂಕಿನ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ, ಕ್ರಮವಹಿಸುವುದು.
ತಾಲ್ಲೂಕು ಉಸ್ತುವಾರಿ ಅಧಿಕಾರಿಯವರು ತಾಲ್ಲೂಕಿಗೆ ತಿಂಗಳಿಗೆ ಕನಿಷ್ಟ ಎರಡು ಬಾರಿ ಭೇಟಿ ನೀಡಬೇಕೆಂದು ಅಧಿಸೂಚನೆಯಲ್ಲಿ ಸೂಚನೆ ನೀಡಲಾಗಿದೆ. ಅಲ್ಲದೆ ತಾಲ್ಲೂಕು ಭೇಟಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ, ಅಭಿವೃಧ್ದಿ ಕಾಮಗಾರಿ ಪರಿಶೀಲನೆ ಕೂಡ ಮಾಡಬೇಕಿರುತ್ತದೆ.
ಹೀಗೆ ಉಸ್ತುವಾರಿ ಅಧಿಕಾರಿಯವರು ತಾಲ್ಲೂಕು ಭೇಟಿ ನೀಡಿ, ನಿರ್ವಹಿಸಿದ ಕಾರ್ಯಗಳ ಬಗ್ಗೆ ವರದಿಯನ್ನು ಜಿಲ್ಲಾ ಉಸ್ತುವಾರಿ ಅಧಿಕಾರಿಯವರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕಾಗಿದೆ.
2021 ಜೂನ್ 22 ರಂದು ಕಳಸ ಹೋಬಳಿಯು ತಾಲ್ಲೂಕು ಎಂದು ಸರ್ಕಾರದ ಅಧಿಸೂಚನೆ ಅನ್ವಯ ಘೋಷಣೆ ಆಗಿದ್ದರೂ, ಇದುವರೆಗೂ ಸರ್ಕಾರದ ವಿವಿಧ ಇಲಾಖೆಗಳು ತಾಲ್ಲೂಕಿನಲ್ಲಿ ಪ್ರಾರಂಭ ಆಗದೇ ಇರುವುದು ವಿಪರ್ಯಾಸವೇ ಸರಿ. ಹೀಗಿರುವಾಗ ಉಸ್ತುವಾರಿ ಅಧಿಕಾರಿಯ ನೇಮಕದಿಂದಾದರೂ ತಾಲ್ಲೂಕಿನ ಸಮಸ್ಯೆಗಳಾದ ಕಳಸ-ಎಸ್.ಕೆ. ಬಾರ್ಡರ್ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆ ಅಭಿವೃದ್ದಿ, ಕುಡಿಯುವ ನೀರಿನ ಸಮಸ್ಯೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ಒತ್ತುವರಿ ಸಮಸ್ಯೆ, ಕಾಡುಪ್ರಾಣಿ ಹಾವಳಿ, ಇರುವ ಇಲಾಖೆಗಳಲ್ಲಿನ ಅಧಿಕಾರಿ, ಸಿಬ್ಬಂದಿ ಕೊರತೆ, ವೈದ್ಯರ ಕೊರತೆ, ಎಗ್ಗಿಲ್ಲದೆ ನಡೆಯುತ್ತಿರುವ ಹಸುಗಳ್ಳತನ, ಅಕ್ರಮ ಕಾರ್ಮಿಕ ವಲಸಿಗರ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಕಾದುನೋಡಬೇಕಿದೆ.
ಈಗಾಗಲೆ ಒಂದು ಬಾರಿ ಎನ್. ತೇಜಸ್ ಕುಮಾರ್ ರವರು ಕಳಸಕ್ಕೆ ಭೇಟಿ ನೀಡಿ, ತಾಲ್ಲೂಕು ಕಛೇರಿಯಲ್ಲಿ ಸಭೆ ನಡೆಸಿ, ಕಳಸ, ಬಾಳೆಹೊಳೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರುತ್ತಾರೆ.
ಇದೇ ತಿಂಗಳಲ್ಲಿ ಉಸ್ತುವಾರಿ ಅಧಿಕಾರಿಗಳು ಕಳಸ ಭೇಟಿ ನೀಡದ್ದಾರೆ.
