oplus_0


ಕಳಸ ಲೈವ್ ವರದಿ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಳಸ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಬುಧವಾರ ಕಳಸದಲ್ಲಿ ಪ್ರತಿಭಟನೆ ನಡೆಸಿತು.
ಕಳಸದ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಕಳಸ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ನಂತರ ಕಳಸ ತಾಲ್ಲೂಕು ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಸಿಇಟಿ ಪರೀಕ್ಷೆಯ ಸಮಯದಲ್ಲಿ ಜನಿವಾರ ತೆಗೆಸಿ ಹಾಗೂ ತುಂಡು ಮಾಡಿ ಕಸದ ಬುಟ್ಟಿಗೆ ಎಸೆದ ವಿಚಾರವು ನಿಜಕ್ಕೂ ದುರಾದೃಷ್ಟಕರ ಮತ್ತು ಬ್ರಾಹ್ಮಣ ಅಥವಾ ಯಜ್ಞೋಪವೀತವನ್ನು ದರಿಸುವ ಜಾತಿ ಪಂಗಡಗಳು ಅದರ ಮೇಲೆ ಇಟ್ಟಿರುವ ಗೌರವ ಅಭಿಮಾನ, ಭಕ್ತಿ ಕೃತ್ಯವೆಸಗಿದ ವ್ಯಕ್ತಿಗಳ ಅರಿವಿಗೂ ಬರಲು ಸಾಧ್ಯವಿಲ್ಲ ಮತ್ತು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬ ಅಲ್ಪ ಆಲೋಚನೆಯೂ ಈ ಕೃತ್ಯ ಎಸೆದವರಿಗೆ ಇದ್ದಂತಿಲ್ಲ.
ಇದರಿಂದಾಗಿ ಸಾಮಾಜಿಕ ಸಾಮರಸ್ಯ ಜಾತಿ ಜಾತಿಗಳ ಪಂಗಡಗಳ ನಡುವೆ ಕಂದರ ಹುಟ್ಟಿಸುವಂತಹ ಘೋರ ಕೃತ್ಯವಿದು. ಒಬ್ಬರ ನಂಬಿಕೆಗಳನ್ನು ಆಚಾರಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾದ ಸುಸಂಸ್ಕøತ ಹೃದಯವಂತರಾದ ನಾವುಗಳು ಮಾದರಿ ಜನಾಂಗವಾಗಬೇಕು ಈಗ ನಡೆದ ರಾಕ್ಷಸಿ ಕೃತ್ಯವನ್ನು ನಮ್ಮ ಕಳಸ ತಾಲ್ಲೂಕು ಬ್ರಾಹ್ಮಣ ಸಮಾಜ ಒಕ್ಕೊರಳಿನಿಂದ ಖಂಡಿಸುತ್ತದೆ. ಮಾತ್ರವಲ್ಲ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ನಂತರ, ಪರೀಕ್ಷಾ ವಿಭಾಗದ ಮುಖ್ಯಸ್ಥರು ಅಂತಹ ಕಾನೂನು ಇಲ್ಲಾ ಎಂದು ಸ್ಪಷ್ಟತೆ ನೀಡಿದ ನಂತರವು ಈ ಪ್ರವೃತ್ತಿ ಮುಂದುವರೆಯುತ್ತಿದ್ದು ಈ ಬಗ್ಗೆ ಸರಕಾರ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ನೊಂದ ವಿದ್ಯಾರ್ಥಿಗಳಿಗೆ ಭವಿಷ್ಯ ಹಾಳಾಗದಂತೆ ಸೂಕ್ತ ಪರಿಹಾರೋಪಾಯವನ್ನು ಮಾಡಬೇಕು.
ಇನ್ನು ಇಲ್ಲಿಂದ ಮುಂದೆ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಯಾವ ಭಾಗದಲ್ಲಿಯೂ ನಡೆಯದಂತೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಜಾಗ್ರತೆ ವಹಿಸಬೇಕೆಂದು ಕೇಳಿಕೊಳ್ಳುತ್ತೇವೆ.ಭಾರತೀಯ ಸಂವಿಧಾನದ ಆರ್ಟಿಕಲ್ 25 ರ ಪ್ರಕಾರ ಪ್ರತಿಯೊಬ್ಬ ಭಾರತೀಯ ನಾಗರೀಕರಿಗೂ ತಮಗೆ ಇಷ್ಟವೆನಿಸುವ ಧರ್ಮವನ್ನು ಅನುಸರಿಸುವ ಹಕ್ಕಿದ್ದು, ಈ ಘಟನೆಯಿಂದ ನಮ್ಮ ಜನಾಂಗಕ್ಕೆ ಭಾರತೀಯ ಸಂವಿಧಾನದ ಅಡಿಯಲ್ಲಿ ದೊರಕಿರುವ ಹಕ್ಕಿಗೆ ಚ್ಯುತಿ ಬಂದಿದ್ದು, ಹಕ್ಕಿಗೆ ಚ್ಯುತಿಯಾಗದಂತೆ ಸೂಕ್ತ ಕಾನೂನನ್ನು ತರಬೇಕು ಮತ್ತು ಇನ್ನು ಮುಂದೆ ಯಾವುದೇ ಸಮಯದಲ್ಲಿ ನಮ್ಮ ಬ್ರಾಹ್ಮಣ ಜನಾಂಗಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆ, ಧರ್ಮನಿಂದನೆ ಮಾಡಿದಾಗ ಧರ್ಮ ನಿಂದನೆಯನ್ನು ಮಾಡಿದಂತಹವರಿಗೆ ಶಿಕ್ಷೆಯಾಗುವಂತೆ ಸೂಕ್ತ ಕಾನೂನನ್ನು ತರಬೇಕು ಅಥವಾ ಇರುವ ಕಾನೂನನ್ನು ಮಾರ್ಪಾಡು ಮಾಡಬೇಕೆಂದು ಬ್ರಾಹ್ಮಣ ಸಮುದಾಯವು ಮನವಿಯ ಮೂಲಕ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಕಳಸ ಅಧ್ಯಕ್ಷ ವೆಂಕಟೇಶ್, ಜಿ.ಕೆ.ಮಂಜಪ್ಪಯ್ಯ, ರಾಜೇಂದ್ರ ಹೆಬ್ಬಾರ್, ಕಿರಣ್, ಭಾಸ್ಕರ್, ಚಂದ್ರಶೇಖರ್, ಗಣೇಶ್ ಭಟ್, ಅ.ರಾ.ಸತೀಶ್ಚಂದ್ರ, ಜಯಕುಮಾರ್ ಭಟ್, ಶ್ರೀಕಾಂತ್, ಅವಿನಾಶ್, ಉದಯ್ ಅತ್ತಿಕುಡಿಗೆ, ನಾಗರಾಜ್, ಜಗದೀಶ್ ಭಟ್, ಇತರರು ಇದ್ದರು.


