ಕಳಸ ಲೈವ್ ವರದಿ
ಬೆಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರು ಇವರ ವತಿಯಿಂದ ರಾಜ್ಯಮಟ್ಟದಲ್ಲಿ ಆಯೋಜಿಸಲಾದ “ವಿಶ್ವ ಆಹಾರ ದಿನ – 2025” ಪ್ರಯುಕ್ತ ನಡೆದ ಜೇನು ಕೃಷಿ ಕಾರ್ಯಗಾರದಲ್ಲಿ ವಲ್ಲಿಕುಡಿಗೆ ಚಂದ್ರಶೇಖರ ಅವರಿಗೆ ಜೇನು ಕೃಷಿಯಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಕಾರ್ಯಕ್ರಮವನ್ನು ಕೃಷಿ ತಂತ್ರಜ್ಞರ ಸಂಸ್ಥೆ (IAT) ಬೆಂಗಳೂರು, ತೋಟಗಾರಿಕೆ ಇಲಾಖೆ – ಕರ್ನಾಟಕ ಸರ್ಕಾರ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಜೇನುಸಾಕಣೆದಾರರ ಸಂಘ, ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.

ರಾಜ್ಯಮಟ್ಟದಲ್ಲಿ ಆಯ್ಕೆಗೊಂಡ ಐದು ಮಂದಿ ಜೇನು ಕೃಷಿಕರಲ್ಲಿ ವಲ್ಲಿಕುಡಿಗೆ ಚಂದ್ರಶೇಖರ ಅವರು ಒಬ್ಬರಾಗಿದ್ದು, ಜೇನು ಸಾಕಾಣಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಹೊಸ ಮಾದರಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಹಾಗೂ ಗುಣಮಟ್ಟದ ಜೇನು ಉತ್ಪಾದನೆಯಲ್ಲಿ ಮಾದರಿ ಸ್ಥಾಪಿಸಿದ್ದಾರೆ.

ಪ್ರಶಸ್ತಿ ವಿತರಣಾ ಸಮಾರಂಭವು ದಿನಾಂಕ 30-10-2025ರಂದು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ (IAT) ಸಭಾಂಗಣದಲ್ಲಿ ಜರುಗಿದ್ದು, ವಿವಿಧ ಕ್ಷೇತ್ರಗಳ ತಜ್ಞರು, ಕೃಷಿ ವಿಜ್ಞಾನಿಗಳು ಹಾಗೂ ಜೇನು ಕೃಷಿಕರು ಭಾಗವಹಿಸಿದ್ದರು.

