
ಕಳಸ ಲೈವ್ ವರದಿ
ದೇಶವ್ಯಾಪಿ ೮ನೇ ಸುತ್ತಿನ ಕಾಲು–ಬಾಯಿ ರೋಗ ಲಸಿಕಾ ಅಭಿಯಾನದ ಅಂಗವಾಗಿ, ಕಳಸ ತಾಲೂಕು ಗಂಗನಕುಡಿಗೆಯಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ದೊರಕಿತು.
ಗಂಗನಕುಡಿಗೆಯ ವಕೀಲ ವೆಂಕಟೇಶ್ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮವನ್ನು ಕಳಸ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಸುನೀತಾ ಹಾಗೂ ಉಪಾಧ್ಯಕ್ಷ ಭಾಸ್ಕರ್ ಗೌಡ ಅವರು ಜ್ಯೋತಿ ಬೆಳಗಿಸಿ, ಗೋಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಜಾನುವಾರು ಅಧಿಕಾರಿಯಾದ ಶ್ರೀ ಎಂ.ಎಮ್. ನಾಗೇಂದ್ರ ಮಾತನಾಡಿ, “ಕಾಲು–ಬಾಯಿ ರೋಗ ನಿಯಂತ್ರಣಕ್ಕಾಗಿ ಪ್ರತಿ ಜಾನುವಾರಿಗೆ ಲಸಿಕೆ ನೀಡುವುದು ಅತ್ಯಂತ ಅಗತ್ಯ. ರೈತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಜಾನುವಾರುಗಳ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ, ದೇಶದಾದ್ಯಂತ ನವೆಂಬರ್ ೩ ರಿಂದ ಡಿಸೆಂಬರ್ ೨ರವರೆಗೆ ಈ ಅಭಿಯಾನ ನಡೆಯಲಿದೆ.
ಈ ಸಂದರ್ಭದಲ್ಲಿ ಪಶುವೈದ್ಯಕೀಯ ಪರೀಕ್ಷಕಿ ಶ್ರೀಮತಿ ಪ್ರಭಾವತಿ ಬಿ.ಟಿ., ಪಶುವೈದ್ಯಕೀಯ ಪರೀಕ್ಷಕ ಶ್ರೀ ಜಯಣ್ಣ ಎಸ್., ಸಿಬ್ಬಂದಿಗಳಾದ ನಾಗರಾಜ್, ಶ್ರಯನ್ ಕುಮಾರ್, ಲಕ್ಷ್ಮೀ ಹಾಗೂ ಸ್ಮಿತಾ ಉಪಸ್ಥಿತರಿದ್ದರು.

