
ಕಳಸ ಲೈವ್ ವರದಿ
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ 36ನೇ ಅಖಿಲ ಭಾರತ ಕ್ರೀಡಾಕೂಟದ ಕಬಡ್ಡಿ ಪಂದ್ಯಾಟದಲ್ಲಿ, ಕಳಸ ತಾಲೂಕಿನ ತನೂಡಿ ಗ್ರಾಮದ ಯುವ ಪ್ರತಿಭೆ ಜ್ಯೋತಿ ಜೆ ಇವರು ಪ್ರಥಮ ಸ್ಥಾನ ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 14 ವರ್ಷದೊಳಗಿನ ಬಾಲಕೀಯರ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಜಯಭೇರಿ ಬಾರಿಸಿದ ಈ ಸಾಧಕಿ, ಇದೀಗ ಮುಂದೆ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟ ಸ್ಕೂಪ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಬಡತನದ ನೆರಳಲ್ಲಿ ಅರಳಿದ ಪ್ರತಿಭೆ
ಜ್ಯೋತಿ ಜೆ ಅವರು ಪುತ್ತೂರು ವಿವೇಕಾನಂದ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ತಂದೆ ಜಯರಾಮ ತಾಯಿ ಸುಜಾತಾ ಅವರದ್ದು ಅತ್ಯಂತ ಬಡ ಕುಟುಂಬ. ಈ ದಂಪತಿಯಲ್ಲಿ ಇಬ್ಬರೂ ವಿಕಲಚೇತನರಾಗಿದ್ದು (ದಿವ್ಯಾಂಗರಾಗಿದ್ದು), ಸಣ್ಣಪುಟ್ಟ ಕೂಲಿ ಕೆಲಸಗಳನ್ನು ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜ್ಯೋತಿಯ ಅಣ್ಣ ಕೂಡಾ ಕುಟುಂಬದ ಕಷ್ಟವನ್ನು ಅರಿತು 9ನೇ ತರಗತಿವರೆಗೆ ಓದಿ ಶಾಲೆಯನ್ನು ಬಿಟ್ಟು, ತನ್ನ ಕುಟುಂಬದ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಉಚಿತ ಶಿಕ್ಷಣ, ಕಷ್ಟದ ಬದುಕು
ಜ್ಯೋತಿ ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತ್ಯಂತ ಮುಂದಿದ್ದಳು. ತನೂಡಿ ಶಾಲೆಯಲ್ಲಿ 5ನೇ ತರಗತಿವರೆಗೆ ಓದಿ ನಂತರ ಬಾಳೆಹೊನ್ನೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಳು. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಗಳಲ್ಲಿ ತನ್ನ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದನ್ನು ಗಮನಿಸಿ, ಪುತ್ತೂರು ವಿವೇಕಾನಂದ ಶಾಲೆಯು ಈ ಪ್ರತಿಭೆಗೆ ಉಚಿತವಾಗಿ ಶಿಕ್ಷಣ ನೀಡುವ ಮೂಲಕ ಆಸರೆಯಾಗಿದೆ.
ಮಗಳು ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದರೂ, ಕ್ರೀಡೆಯ ಸಾಧನೆಗೆ ಹಣದ ಅನಿವಾರ್ಯತೆ ಕುಟುಂಬವನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಿದೆ. “ಮಗಳಿಗೆ ಕ್ರೀಡೆಯಲ್ಲಿ ಸಾಕಷ್ಟು ಭವಿಷ್ಯವಿದೆ. ಶಿಕ್ಷಣ ಉಚಿತವಾಗಿ ಸಿಕ್ಕಿದೆ. ಆದರೆ, ಕ್ರೀಡೆಗಾಗಿ ಸಾಕಷ್ಟು ಹಣವನ್ನು ನಾವು ಹೊಂದಿಸಬೇಕಾಗುತ್ತದೆ. ಹೇಗೋ ಕಷ್ಟಪಟ್ಟು ಹೊಂದಿಸಿಕೊಡುತ್ತಿದ್ದೇವೆ. ಅವಳು ಎಷ್ಟು ಸಾಧನೆ ಮಾಡುತ್ತಾಳೋ ಅದಕ್ಕೆ ನಾವು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ” ಎನ್ನುತ್ತಾರೆ ತಂದೆ ಜಯರಾಮ,

ನಾವೂ ನೆರವಾಗೋಣ
ಕಬಡ್ಡಿ ಆಟದಲ್ಲಿ ರಾಷ್ಟ್ರಮಟ್ಟದ ಸಾಧನೆಗೆ ಹೊರಟಿರುವ ಈ ಬಡ ಪ್ರತಿಭೆಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದೆ. ದೈಹಿಕ ಸವಾಲುಗಳ ನಡುವೆಯೂ ಮಗಳ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಜಯರಾಮ ಅವರ ಈ ಪ್ರಯತ್ನಕ್ಕೆ ನೆರವು ನೀಡಲು ದಾನಿಗಳು ಮುಂದೆ ಬರಬೇಕಿದೆ.
ಜ್ಯೋತಿ ಅವರ ಕ್ರೀಡಾ ಸಾಧನೆಗೆ ಸಹಾಯ ಮಾಡಲು ಆಸಕ್ತಿ ಇರುವವರು, ಆಕೆಯ ತಂದೆ ಜಯರಾಮ ಅವರನ್ನು ಈ ನಂಬರ್ ಮೂಲಕ ಸಂಪರ್ಕಿಸಬಹುದು: 6363550660
