

ಕಳಸ ಲೈವ್ ವರದಿ
ಆಧುನಿಕತೆಯ ಅಬ್ಬರದಲ್ಲಿ ನಮ್ಮ ಅಸ್ಮಿತೆಯಾಗಿರುವ ಮಣ್ಣಿನ ಕಲೆಗಳು ಮಾಸುತ್ತಿರುವ ಇಂದಿನ ದಿನಗಳಲ್ಲಿ, ಕಳಸದ ಮಣ್ಣಿನಲ್ಲಿ ಜಾನಪದದ ಕಂಪನ್ನು ಪಸರಿಸುವ ಸುಂದರ ಸಂಭ್ರಮವೊAದು ಸಾಕ್ಷಿಯಾಯಿತು. ಕರ್ನಾಟಕ ಜಾನಪದ ಪರಿಷತ್ತು ಕಳಸ ತಾಲ್ಲೂಕು ಘಟಕದ ಎರಡನೇ ವರ್ಷದ ವಾರ್ಷಿಕೋತ್ಸವವು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯದೆ, ನಮ್ಮ ಮೂಲ ಬೇರುಗಳನ್ನು ನೆನಪಿಸುವ ಭಾವನಾತ್ಮಕ ಸಂಗಮವಾಗಿ ಮೂಡಿಬಂತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜಿತ್ ಕೆಳಗೂರು ಮಾತನಾಡಿ “ಜಾನಪದ ಕಲೆಗಳು ಕೇವಲ ಪ್ರದರ್ಶನದ ವಸ್ತುಗಳಲ್ಲ, ಅವು ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಬದುಕಿನ ಪಾಠಗಳು. ನಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾದರೆ ನಾವು ಕಲಾವಿದರನ್ನು ಬೆಳೆಸಬೇಕು. ಯಾಂತ್ರಿಕ ಜೀವನದ ನಡುವೆ ಮಣ್ಣಿನ ಸೊಗಡನ್ನು ಮರೆಯಬಾರದು” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಅ.ರಾ. ಸತೀಶ್ಚಂದ್ರ ಅವರು ಮಾತನಾಡಿ, “ಜಾನಪದ ಎಂಬುದು ನಮ್ಮ ಸಂಸ್ಕೃತಿಯ ಬೇರು. ಮಕ್ಕಳಲ್ಲಿ ಬಾಲ್ಯದಲ್ಲೇ ಈ ಕಲೆಗಳ ಬಗ್ಗೆ ಪ್ರೀತಿ ಮೂಡಿಸಿದರೆ ಮಾತ್ರ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಹಿಟ್ಟಂಡೆ ಹಿಡಿ’ ಮತ್ತು ವಿವಿಧ ಜಾನಪದ ಕಲಾಕೃತಿಗಳ ಪ್ರದರ್ಶನವು ನಮ್ಮ ಹಳೆಯ ಕಾಲದ ವೈಭವವನ್ನು ಕಣ್ಣಮುಂದೆ ತಂದಿಟ್ಟಿತು. ಪುಟಾಣಿ ಮಕ್ಕಳು ಜಾನಪದ ವೇಷಭೂಷಣ ತೊಟ್ಟು, ಜಾನಪದ ಗೀತೆಗಳಿಗೆ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿ ನಮ್ಮ ಸಂಸ್ಕೃತಿಯು ಜೀವಂತವಾಗಿತ್ತು.
ಜಾನಪದ ಗೀತೆಗಳ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಜೀವ ಮಂಜಮ್ಮ ಅವರಿಗೆ 2025ನೇ ಸಾಲಿನ ‘ಜಾನಪದ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ಕಳಸದ ಕೀರ್ತಿಯನ್ನು ಬೆಳಗಿದ ಕ್ರೀಡಾಪಟುಗಳಾದ ವಿಧುಷ ಜೈನ್, ಮೊಹಮ್ಮದ್ ಸಲ್ಮಾನುಲ್ ಫಾರಿಸ್ ಮತ್ತು ಮೊಹಮ್ಮದ್ ಶಾಜ್ ಹಾಗೂ ಅದ್ಬುತ ಕಲೆಗಾರ ವಿನಯ್ ಅವರನ್ನು ಗೌರವಿಸುವ ಮೂಲಕ ನಾಡಿನ ಪ್ರತಿಭೆಗಳಿಗೆ ಶಕ್ತಿ ತುಂಬಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಕೆ.ಕೆ. ಬಾಲಕೃಷ್ಣ ಭಟ್ ಸೇರಿದಂತೆ ಗೀತಾ ಮಕ್ಕಿಮನೆ, ಜಾನಕಿ ಸುಂದರೇಶ್, ಪಿ.ವಿ. ಕೃಷ್ಣಮೂರ್ತಿ ಭಟ್, ಶೇಖರ ಶೆಟ್ಟಿ ಹಾಗೂ ಪ್ರಶಾಂತ್ ಎಚ್.ಆರ್ ಇದ್ದರು.
