ಕಳಸ ಲೈವ್ ವರದಿ
ಸರ್ಕಾರಿ ಶಾಲೆಗಳೆಂದರೆ ಕೇವಲ ನಾಲ್ಕು ಗೋಡೆಗಳಲ್ಲ, ಅವು ಭವಿಷ್ಯದ ಕನಸುಗಳನ್ನು ನನಸಾಗಿಸುವ ಸುಂದರ ತಾಣಗಳು ಎಂಬುದನ್ನು ಕಳಸದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತೊಮ್ಮೆ ಸಾಬೀತುಪಡಿಸಿದೆ. ಸೋಮವಾರ ನಡೆದ ಶಾಲಾ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ವೈಭವವು ಕೇವಲ ಒಂದು ಸಮಾರಂಭವಾಗಿರದೆ, ಮಕ್ಕಳ ಶ್ರಮ ಮತ್ತು ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಶಾಲೆಯ ಉಪಪ್ರಾಂಶುಪಾಲರಾದ ಸುರೇಶ್ ಅವರು ಮಂಡಿಸಿದ 2025ನೇ ಸಾಲಿನ ವಾರ್ಷಿಕ ವರದಿಯು ಕೇವಲ ಅಂಕಿ ಅಂಶಗಳಾಗಿರಲಿಲ್ಲ; ಅದು ವಿದ್ಯಾರ್ಥಿಗಳ ಬೆವರಿನ ಹನಿ ಮತ್ತು ಗೆಲುವಿನ ಹೆಜ್ಜೆಗಳ ಸಂಕಲನವಾಗಿತ್ತು. ಕ್ರೀಡೆ, ವಿಜ್ಞಾನ ಹಾಗೂ ಪ್ರತಿಭಾ ಕಾರಂಜಿಯAತಹ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಮಣ್ಣಿನ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ಮಿಂಚಿರುವುದನ್ನು ಕೇಳಿ ಸಾರ್ವಜನಿಕರು ಹೆಮ್ಮೆ ಪಟ್ಟರು.

2025 ಸಾಲಿನಲ್ಲಿ ಶಾಲೆಯ ಮಕ್ಕಳು ಕ್ರೀಡೆ, ವಿಜ್ಞಾನ, ಪ್ರತಿಭಾ ಕಾರಂಜಿ ಹಾಗೂ ವಿವಿದ ಕ್ಷೇತ್ರಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟç ಮಟ್ಟದ ಹಂತಗಳಲ್ಲಿ ಸಾಧನೆಗೈದ ವಿಧ್ಯಾರ್ಥಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಬಾರಿಯ ಕಾರ್ಯಕ್ರಮದ ಅತ್ಯಂತ ಭಾವನಾತ್ಮಕ ಕ್ಷಣವೆಂದರೆ ಅದು ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ವತಃ ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ನಗದು ಬಹುಮಾನ ನೀಡಿ ಗೌರವಿಸಿದ್ದು. “ಸೋಲುವಾಗ ಹೆಗಲಾಗುವ, ಗೆದ್ದಾಗ ಬೆನ್ನುತಟ್ಟುವ” ಗುರುಗಳ ಈ ಪ್ರೀತಿ ಶಾಲೆಯ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿತು. ಇದೇ ವೇಳೆ ಏಪ್ರಿಲ್ನಲ್ಲಿ ನಿವೃತ್ತರಾಗಲಿರುವ ಉಪನ್ಯಾಸಕ ಮುಕ್ಕುಂದ ಕಿಶೋರ್ ಅವರನ್ನು ಭಾವಪೂರ್ಣವಾಗಿ ಸನ್ಮಾನಿಸಿ, ಅವರ ಸುದೀರ್ಘ ಸೇವೆಯನ್ನು ಸ್ಮರಿಸಲಾಯಿತು.

‘ಯಕ್ಷದ್ರುವ ಪಟ್ಲ ಫೌಂಡೇಶನ್’ ವತಿಯಿಂದ ಆರು ತಿಂಗಳ ಕಾಲ ತರಬೇತಿ ಪಡೆದ ಮಕ್ಕಳು ಪ್ರದರ್ಶಿಸಿದ ‘ಗಿರಿಜಾ ಕಲ್ಯಾಣ’ ಯಕ್ಷಗಾನವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಪುಟ್ಟ ಮಕ್ಕಳ ಹೆಜ್ಜೆಗಾರಿಕೆ ಮತ್ತು ಸಂಭಾಷಣಾ ಚಾತುರ್ಯ ಕಂಡ ಕಲಾರಸಿಕರು ನಿಬ್ಬೆರಗಾದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸ್ಸಿನ ತಂತಿಯನ್ನು ಮೀಟುವಲ್ಲಿ ಯಶಸ್ವಿಯಾದವು.
ಸರ್ಕಾರಿ ಶಾಲೆಗಳ ಬಗ್ಗೆ ಇಂದಿಗೂ ಸಮಾಜದಲ್ಲಿ ಒಂದು ಬಗೆಯ ಅಸಡ್ಡೆ ಇದೆ. ಆದರೆ ಕಳಸದ ಈ ಕೆಪಿಎಸ್ ಶಾಲೆ ಅದಕ್ಕೆ ಪ್ರಬಲ ಉತ್ತರ ನೀಡಿದೆ. ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾದ ಶಿಕ್ಷಣ, ಕ್ರೀಡೆ ಮತ್ತು ಸಂಸ್ಕಾರವನ್ನು ಇಲ್ಲಿ ನೀಡಲಾಗುತ್ತಿದೆ. ಉದ್ಯಮಿ ಅಬ್ದುಲ್ ಹ್ಯಾರಿಸ್ ಅವರು ಶಾಲೆಯ ಅಭಿವೃದ್ಧಿಗೆ ನೀಡಿರುವ ಒಂದು ಲಕ್ಷ ರೂಪಾಯಿಗಳ ಅನುದಾನವು, ಶಾಲೆಯ ಪ್ರಗತಿಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ಸರ್ಕಾರಿ ಶಾಲೆ ಎಂದರೆ ಬಡತನದ ಸಂಕೇತವಲ್ಲ, ಅದು ಸಂಸ್ಕಾರದ ಗಣಿ. ಕಳಸ ಕೆಪಿಎಸ್ನ ಶಿಕ್ಷಕರು ತೋರುತ್ತಿರುವ ಶ್ರಮ ಮತ್ತು ಪ್ರೀತಿ ಪ್ರತಿಯೊಬ್ಬ ಪೋಷಕರಿಗೂ ಮಾದರಿ. ಮಕ್ಕಳ ಭವಿಷ್ಯ ರೂಪಿಸುವ ಈ ‘ಅಕ್ಷರ ದೇಗುಲ’ಕ್ಕೆ ನಮ್ಮೆಲ್ಲರ ಬೆಂಬಲ ಸದಾ ಇರಲಿ.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ರಫೀಕ್, ಉಪಾಧ್ಯಕ್ಷ ವಸಂತ್, ಪ್ರಾಂಶುಪಾಲ ಅನಂತ ಪದ್ಮನಾಭ, ನಿವೃತ್ತ ಮುಖ್ಯ ಶಿಕ್ಷಕ ಜನಾರ್ಧನ ಮಂಡಗಾರು, ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಟ್, ಯಕ್ಷ ದ್ರುವ ಪಟ್ಲ ಫೌಂಡೇಷನ್ನ ನಾಗಭೂಷಣ್, ರಜನೀಶ್ ಹೊಳ್ಳ, ತರಬೇತುದಾರರಾದ ಟಿ.ಎನ್. ಜ್ಯೋತಿ, ಎಸ್ಡಿಎಂಸಿ ಸದಸ್ಯರುಗಳು ಉಪಸ್ಥಿತರಿದ್ದು ಮಕ್ಕಳ ಬೆನ್ನು ತಟ್ಟಿದರು.

