
ಕಳಸ ಲೈವ್ ವರದಿ
ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಉದಯೋನ್ಮುಖ ಕಲಾವಿದೆ, ಹಳುವಳ್ಳಿ ತಂಬಿಕುಡಿಗೆಯ ಟಿ.ಎನ್. ಶ್ರೀರಕ್ಷಾ ಅವರು ಮಂಗಳೂರು ಪಚ್ಚನಾಡಿಯ ಕಾರ್ತಿಕ್ ಪಿ. ರಾವ್ ಅವರೊಂದಿಗೆ ಇಂದು (ಫೆಬ್ರವರಿ 8) ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಹಳುವಳ್ಳಿಯ ಶ್ರೀ ಸರ್ವಸಿದ್ದಿ ಕುಮಾರ ಸಭಾ ಭವನದಲ್ಲಿ ಬ್ರಾಹ್ಮಣ ಸಂಪ್ರದಾಯದAತೆ, ಶಾಸ್ತ್ರೋಕ್ತವಾಗಿ ಮದುವೆಯ ವಿಧಿವಿಧಾನಗಳು ಜರುಗಿದವು. ಹಳುವಳ್ಳಿಯ ದಿವಂಗತ ಟಿ.ಕೆ. ನಾರಾಯಣ ಭಟ್ ಹಾಗೂ ಖ್ಯಾತ ಯಕ್ಷಗಾನ ಕಲಾವಿದೆ ಜ್ಯೋತಿ ದಂಪತಿಯ ಪುತ್ರಿಯಾದ ಶ್ರೀರಕ್ಷಾ, ಪಚ್ಚನಾಡಿಯ ವಿಜಯಲಕ್ಷ್ಮಿ ಮತ್ತು ಪ್ರಮೋದ್ ರಾವ್ ಅವರ ಪುತ್ರ ಕಾರ್ತಿಕ್ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ಹೊಸ ಬಾಳಿಗೆ ಹೆಜ್ಜೆ ಇರಿಸಿದರು.

ಯಕ್ಷಗಾನ ಕಲಾವಿದೆಯ ಮದುವೆಯಾದ್ದರಿಂದ, ಇಲ್ಲಿ ಕಲೆಗೆ ವಿಶೇಷ ಆದ್ಯತೆ ನೀಡಲಾಗಿತ್ತು. ತೆಂಕು ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ ನಡೆದ ‘ಯಕ್ಷ-ಗಾನ ವೈಭವ’ ಕಾರ್ಯಕ್ರಮವು ಮದುವೆಯ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು. ನೆರೆದಿದ್ದ ಅತಿಥಿಗಳು ಈ ಕಲಾ ರಸದೌತಣವನ್ನು ಕಣ್ತುಂಬಿಕೊAಡರು.
ಶ್ರೀರಕ್ಷಾ ಅವರು ಈವರೆಗೆ 35ಕ್ಕೂ ಹೆಚ್ಚು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದು, ಸುಮಾರು 250ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಕಲಾ ನೈಪುಣ್ಯಕ್ಕೆ ಈಗಾಗಲೇ ಹಲವಾರು ಪ್ರಶಸ್ತಿ, ಬಿರುದು ಹಾಗೂ ಸನ್ಮಾನಗಳು ಸಂದಿವೆ.
ಈ ಶುಭ ಸಮಾರಂಭಕ್ಕೆ ಬಂಧು-ಮಿತ್ರರು, ಕುಟುಂಬಸ್ಥರು, ಯಕ್ಷಗಾನ ಕ್ಷೇತ್ರದ ಹಿರಿಯ-ಕಿರಿಯ ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು
