
ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಯೋಜನೆ ರೂಪಿಸುವವನಿಗೆ ದೂರದೃಷ್ಟಿ ಇರಬೇಕು, ಅನುಷ್ಠಾನ ಮಾಡುವವನಿಗೆ ಹೊಣೆಗಾರಿಕೆ ಇರಬೇಕು. ಆದರೆ ಕಳಸ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ರಸ್ತೆ ಕಾಮಗಾರಿಯನ್ನು ನೋಡಿದರೆ ಈ ಎರಡೂ ಗುಣಗಳ ಕ್ಷಾಮ ಎದ್ದುಕಾಣುತ್ತಿದೆ. ಸೋಮವಾರ ಸುರಿದ ಕೇವಲ ಒಂದು ಮಳೆಗೆ ಪಟ್ಟಣದ ಜನತೆ ಅನುಭವಿಸಿದ ನರಕ ಯಾತನೆ ಕೇವಲ ಪ್ರಕೃತಿಯ ವಿಕೋಪವಲ್ಲ, ಅದು ನಿಸ್ಸಂದೇಹವಾಗಿ ಅಧಿಕಾರಿ ನಿರ್ಮಿತ ವಿಪತ್ತು.

ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಸಮೀಪ ರಸ್ತೆ ಕಾಂಕ್ರೀಟೀಕರಣ ಮಾಡಲಾಗಿದೆ. ರಸ್ತೆ ನಿರ್ಮಾಣವಾದರೆ ಸಾಕು ಅಭಿವೃದ್ಧಿಯಾಯಿತು ಎಂದು ಬೀಗುವ ಜನಪ್ರತಿನಿಧಿಗಳು ಮತ್ತು ಇಂಜಿನಿಯರ್ಗಳು ವಿಜ್ಞಾನದ ಮೂಲಪಾಠವನ್ನೇ ಮರೆತಂತಿದೆ. ರಸ್ತೆ ಎಷ್ಟೇ ಗಟ್ಟಿಯಾಗಿದ್ದರೂ, ಹರಿದು ಬರುವ ನೀರು ಸರಾಗವಾಗಿ ಹೋಗಲು ಚರಂಡಿಯ ವ್ಯವಸ್ಥೆ ಇಲ್ಲದಿದ್ದರೆ ಆ ರಸ್ತೆ ಶಾಪವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಕಳಸದ ಇಂದಿನ ಸ್ಥಿತಿಯೇ ಸಾಕ್ಷಿ. ಕೈಮರದಿಂದ ಹರಿದು ಬರುವ ನೀರು ಕೆಸರು ಮಣ್ಣಿನೊಂದಿಗೆ ರಸ್ತೆಯನ್ನೇ ನದಿಯನ್ನಾಗಿಸಿದೆ. ಇದು ಅಭಿವೃದ್ಧಿ’ಯೋ ಅಥವಾ ಅಧೋಗತಿ’ಯೋ?

ಮಳೆ ಬಂದಾಗ ಕೆಸರು ದೋಣಿ, ಮಳೆ ನಿಂತಾಗ ದೂಳಿನ ರಾಣಿ! ಸೋಮವಾರ ಕೆಸರು ತುಂಬಿದ ಮಳೆ ನೀರು ಕಳಸ ಪಟ್ಟಣದ ಮುಖ್ಯ ರಸ್ದತೆಯಲ್ಲಿ ಹರಿದು, ಮಂಗಳವಾರದ ಬಿಸಿಲಿಗೆ ರಸ್ತೆಯಲ್ಲಿದ್ದ ಕೆಸರು ಒಣಗಿ ಇಡೀ ಪಟ್ಟಣ ದೂಳಿನ ಮಯವಾಗಿದೆ. ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿರುವ ದೂಳು ಸಾರ್ವಜನಿಕರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಉಸಿರಾಡಲು ಹರಸಾಹಸ ಪಡುತ್ತಿರುವ ಜನತೆ, ತೆರಿಗೆ ಕಟ್ಟಿದ ತಪ್ಪಿಗೆ ಈ ನರಕ ದರ್ಶನ ಮಾಡಬೇಕೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ಕೋಟಿ ವೆಚ್ಚದ ಕಾಮಗಾರಿಯಲ್ಲಿ ಚರಂಡಿ ನಿರ್ಮಾಣವನ್ನು ಕೈಬಿಟ್ಟಿದ್ದು ಯಾರ ಹಿತಾಸಕ್ತಿಗಾಗಿ?ರಸ್ತೆ ಕಾಮಗಾರಿಯ ಪ್ರಾರಂಬದಲ್ಲಿಯೇ ರಸ್ತೆಯ ಒಂದು ಬದಿಯಲ್ಲಿ ಚರಂಡಿಯ ವ್ಯವಸ್ಥೆಯನ್ನು ಮಾಡಿ ಅದನ್ನು ಎಲ್ಲಿಗೆ ಕೊನೆಗೊಳಿಸಬೇಕು ಎಂಬ ಗೊಂದಲದಲ್ಲಿ ಅದನ್ನು ಅರ್ಧದಲ್ಲಿಯೇ ಕೈಬಿಟ್ಟ ಪರಿಣಾಮ ಹರಿದು ಬಂದ ನೀರು ಮುಖ್ಯ ರಸ್ತೆಯಲ್ಲಿಯೇ ಹರಿದು ಪಟ್ಟಣ ಸೇರಿ ಇಂದು ಕಳಸದ ಜನ ನರಕ ಯಾತನೆ ಅನುಭವಿಸಬೇಕಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯು ದುಸ್ಥಿತಿಯಲ್ಲಿ ಇದ್ದ ಪರಿಣಾಮ ಶಾಸಕರ ಮುತುವರ್ಜಿಯಿಂದ ಒಂದು ಕೋಟಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ, ಸರಕಾರದ ಒಂದು ಕೋಟಿ ಹಣವೇನೋ ಖರ್ಚಾಗಿದೆ, ಆದರೆ ಅಧಿಕಾರಿಗಳ ಬೇಜವಬ್ದಾರಿತನ ಮತ್ತು ಸರಿಯಾದ ರೂಪುರೇಷೆ ಇಲ್ಲದ ಕಾಮಗಾರಿಯಿಂದ ಅದರ ಪ್ರತಿಫಲ ಮಾತ್ರ ಸಾರ್ವಜನಿಕರಿಗೆ ಸಿಗದೆ ತೊಂದರೆ ಅನುಭವಿಸಬೇಕಾಗಿದೆ.
ಮುಂಗಾರು ಮಳೆ ಇನ್ನು ಆರಂಭವಾಗಬೇಕಷ್ಟೇ. ಮುನ್ಸೂಚನೆಯಾಗಿ ಬಂದ ಈ ಮಳೆಯೇ ಇಷ್ಟೊಂದು ಅವಾಂತರ ಸೃಷ್ಟಿಸಿರುವಾಗ, ಕಳಸದ ಅಬ್ಬರದ ಮಳೆಗೆ ಪಟ್ಟಣದ ಗತಿ ಏನಾಗಬೇಡ? ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಕಳಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.
ಕೋಟ್: ಚೆನ್ನಯ್ಯ, ಲೋಕೋಪಯೋಗಿ ಇಲಾಖ ಇಂಜಿನೀಯರ್
ರಸ್ತೆಯ ಅಂಚಿನಲ್ಲಿ ಚರಂಡಿಯ ನಿರ್ಮಾಣ ತೊಂದರೆಯಾಗಿದೆ.ಒAದು ವಾರದೊಳಗಾಗಿ ಒಂದು ಬದಿಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗುತ್ತದೆ.ದೇವಸ್ಥಾನದ ಬದಿಗೆ ತಡೆಗೋಡೆ ನಿರ್ಮಾಣವಾಗುತ್ತದೆ.ಆಗ ಆ ಬದಿಗೂ ಚರಂಡಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ.ಸಧ್ಯದಲ್ಲಿಯೇ ಎರಡೂ ಕಾಮಗಾರಿಗಳನ್ನು ಪ್ರಾರಂಭ ಮಾಡುತ್ತೇವೆ.
