ಕಳಸ ಲೈವ್ ವರದಿ
ವಿದ್ಯಾದಾನವೇ ಶ್ರೇಷ್ಠ ದಾನ ಎಂಬ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕಳಸದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ರಾಜೇಂದ್ರ ಹೆಬ್ಬಾರ್ ಹಿತ್ತಲುಮಕ್ಕಿ ಅವರು, ಈ ಬಾರಿಯೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೀರೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ., ಬಿ.ಕಾಂ. ಹಾಗೂ ಬಿ.ಸಿ.ಎ. ಪದವಿ ಪಡೆಯಲು ಇಚ್ಛಿಸುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಸಂಪೂರ್ಣ ಪ್ರವೇಶಾತಿ ಶುಲ್ಕವನ್ನು ಭರಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಶಿಕ್ಷಣದ ವೆಚ್ಚ ಏರುತ್ತಿರುವಾಗ, ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ಹಣದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ರಾಜೇಂದ್ರ ಹೆಬ್ಬಾರ್ ಅವರ ಈ ವಿಶಾಲ ಮನೋಭಾವ ಇತರ ದಾನಿಗಳಿಗೂ ಪ್ರೇರಣೆಯಾಗಿದೆ. ಈ ಬಾರಿ ಸುಮಾರು 4 ಲಕ್ಷ ರೂಗಳ ಶುಲ್ಕವನ್ನು ಅವರು ಭರಿಸಲಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ವರ್ಗದ ಆರ್ಥಿಕವಾಗಿ ಅನಾನುಕೂಲವಿರುವ ಅರ್ಹ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದೆ.
ಮೊದಲಿಗೆ ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಶುಲ್ಕ ವಿನಾಯಿತಿ ನೀಡಲಾಗುವುದು.
ಕಳಸ ಪಟ್ಟಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಸರ್ಕಾರದ ಉಚಿತ ಹಾಸ್ಟೆಲ್ ಸೌಲಭ್ಯವೂ ಇರುವುದರಿಂದ, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಯಾವುದೇ ಆತಂಕವಿಲ್ಲದೆ ಪ್ರವೇಶ ಪಡೆಯಬಹುದಾಗಿದೆ.
ದಾನಿಗಳ ಈ ಮಹತ್ಕಾರ್ಯದ ಬಗ್ಗೆ ಪ್ರಾಂಶುಪಾಲರಾದ ವಿನಯ ಕುಮಾರ್ ಶೆಟ್ಟಿ ಅವರು ಹರ್ಷ ವ್ಯಕ್ತಪಡಿಸಿದ್ದು, ಸಮಾಜದ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ ರಾಜೇಂದ್ರ ಹೆಬ್ಬಾರ್ ಅವರ ಈ ಕಾರ್ಯ ಶ್ಲಾಘನೀಯ,” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ತಡಮಾಡದೆ ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಮೊಬೈಲ್ ಸಂಖ್ಯೆ 9844247398 ಅನ್ನು ಸಂಪರ್ಕಿಸಬಹುದು
