
ಕಳಸ ಲೈವ್ ವರದಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಕಳಸ-ಹೊರನಾಡು ಮುಖ್ಯ ರಸ್ತೆಯ ‘ಹೆಬ್ಬಾಳೆ’ ಎಂಬಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ಬೃಹತ್ ಕಂಟೈನರ್ ಒಂದು ಇದೀಗ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಈ ಕಂಟೈನರ್ ಜೀವಂತ ಸಾಕ್ಷಿಯಂತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಎರಡು ವರ್ಷದ ಹಿಂದೆ ಹೆಬ್ಬಾಳೆಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ, ಸಿಮೆಂಟ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಈ ಬೃಹತ್ ಕಂಟೈನರ್ನ್ನು ತಂದು ರಸ್ತೆ ಬದಿಯಲ್ಲಿ ಇಡಲಾಗಿತ್ತು. ಆದರೆ, ಈಗ ಸೇತುವೆ ಕಾಮಗಾರಿ ಮುಗಿದು ಬರೋಬ್ಬರಿ ಒಂದು ವರ್ಷ ಕಳೆದಿದೆ. ಕಾಮಗಾರಿ ಮುಗಿದ ತಕ್ಷಣವೇ ಈ ಕಂಟೈನರ್ ಅನ್ನು ಇಲ್ಲಿಂದ ತೆರವುಗೊಳಿಸಬೇಕಾದ್ದು ಗುತ್ತಿಗೆದಾರರ ಕರ್ತವ್ಯವಾಗಿತ್ತು. ಆದರೆ, ವರ್ಷ ಕಳೆದರೂ ಇದನ್ನು ಸ್ಥಳಾಂತರಿಸುವ ಯಾವುದೇ ಮನಸ್ಸು ಮಾಡದಿರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

ಈ ಕಂಟೈನರ್ನ್ನು ಅಪಾಯಕಾರಿ ಕಡಿದಾದ ತಿರುವು ಮತ್ತು ಕಡಿದಾದ ಇಳಿಜಾರು ಪ್ರದೇಶದ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಗೆ ನಿತ್ಯವೂ ನೂರಾರು ಪ್ರವಾಸಿ ವಾಹನಗಳು, ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಸ್ಥಳೀಯ ವಾಹನಗಳು ಇದೇ ರಸ್ತೆಯಲ್ಲೇ ಸಂಚರಿಸುತ್ತವೆ.
ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸರಿಯಾಗಿ ಕಾಣಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ದೈತ್ಯ ಕಂಟೈನರ್ ರಸ್ತೆಯ ಬಹುಭಾಗವನ್ನು ಆಕ್ರಮಿಸಿಕೊಂಡಿರುವುದರಿAದ, ಎದುರು-ಬದುರು ಬರುವ ವಾಹನಗಳಿಗೆ ಪರಸ್ಪರ ಸೈಡ್ ಕೊಡಲು ಜಾಗವೇ ಇಲ್ಲದಂತಾಗಿದೆ. ಇಳಿಜಾರು ಪ್ರದೇಶವಾಗಿರುವುದರಿಂದ ವಾಹನಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಒಮ್ಮೆ ವಾಹನಗಳು ಮುಖಾಮುಖಿಯಾದರೆ, ಹಿಂದೆ-ಮುAದೆ ಚಲಿಸಲೂ ಜಾಗವಿಲ್ಲದೆ ಗಂಟೆಗಟ್ಟಲೆ ಕೃತಕ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಈ ಕಂಟೈನರ್ ರಸ್ತೆ ಬದಿಯ ಚರಂಡಿಗೆ ತೀರಾ ಹೊಂದಿಕೊ0ಡ0ತೆ ಇರುವುದರಿಂದ ಮತ್ತೊಂದು ದೊಡ್ಡ ಆಪತ್ತು ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿದು ಹೋಗಬೇಕಾದ ಮಳೆನೀರು ಕಂಟೈನರ್ ಅಡ್ಡಿಯಾಗಿರುವುದರಿಂದ ಸರಾಗವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಇಡೀ ಮಳೆನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ.

ರಸ್ತೆಯ ಮೇಲೆ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ಈಗಾಗಲೇ ಡಾಂಬರು ಕಿತ್ತುಹೋಗಿ ರಸ್ತೆ ಕೊರೆತ ಉಂಟಾಗುತ್ತಿದೆ. ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರಸ್ತೆ, ಕೇವಲ ಒಂದು ಕಂಟೈನರ್ ಹಠಮಾರಿತನದಿಂದಾಗಿ ಹಾಳಾಗುತ್ತಿದೆ.
ಕಾಮಗಾರಿ ಮುಗಿದು ವರ್ಷ ಕಳೆದರೂ ಗುತ್ತಿಗೆದಾರರು ಕಂಟೈನರ್ ತೆರವುಗೊಳಿಸದೆ ಇರಲು ಕಾರಣವೇನು? ರಸ್ತೆ ಬದಿಗಳು ಇವರ ಖಾಸಗಿ ಆಸ್ತಿಯೇ? ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ? ಇಲ್ಲಿ ಯಾವುದಾದರೂ ದೊಡ್ಡ ಅವಘಡ ಸಂಭವಿಸಿ, ಪ್ರಾಣಹಾನಿಯಾದ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹೆಬ್ಬಾಳೆಯ ಈ ಕಡಿದಾದ ತಿರುವಿನಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವನ್ನು ತಪ್ಪಿಸಲು ಮತ್ತು ಮಳೆಯಿಂದ ರಸ್ತೆ ಹಾಳಾಗುವುದನ್ನು ತಡೆಯಲು ಲೋಕೋಪಯೋಗಿ ಇಲಾಖೆ ಹಾಗೂ ಸಂಬAಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ತಕ್ಷಣವೇ ಈ ಕಂಟೈನರ್ ಅನ್ನು ಇಲ್ಲಿಂದ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಮತ್ತು ಚರಂಡಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
