ಕಳಸ ಲೈವ್ ವರದಿ
ಬಿ.ಸಿ. ರೋಡ್ನ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯಳ ಭೀಕರ ಕೊಲೆ ಮತ್ತು ಆರೋಪಿ ಚೇತನ್ನ ಆತ್ಮಹತ್ಯೆ ಯತ್ನದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪ್ರೀತಿಯ ಹೆಸರಿನಲ್ಲಿ ನಡೆದ ಈ ರಕ್ತಪಾತ ಕೇವಲ ಒಂದು ಜೀವವನ್ನು ಬಲಿ ಪಡೆದಿಲ್ಲ, ಬದಲಿಗೆ ಎರಡು ಕುಟುಂಬಗಳನ್ನು ಜೀವಂತ ಹೆಣವಾಗಿಸಿದೆ.
ಈ ಘಟನೆ ನಡೆದಾಗಿನಿಂದ ಮನಸ್ಸು ನಿರಾಳವಾಗಿಲ್ಲ. ಕಣ್ಣು ಮುಚ್ಚಿದರೆ ಸಾಕು, ಆ ಕ್ಷಣದ ಭಯಾನಕತೆ ಕಣ್ಣಮುಂದೆ ಬಂದು ನಿಲ್ಲುತ್ತದೆ. ಮನುಷ್ಯನ ಮನಸ್ಸು ಇಷ್ಟು ಕ್ರೂರವಾಗಲು ಹೇಗೆ ಸಾಧ್ಯ? ಆ ಕರಾಳ ಕ್ಷಣದಲ್ಲಿ ಅವರಿಬ್ಬರ ಮನಸ್ಸಿನಲ್ಲಿ ಏನೆಲ್ಲಾ ತಲ್ಲಣಗಳು ಓಡುತ್ತಿರಬಹುದು ಎಂಬ ಪ್ರಶ್ನೆಗಳು ಕಾಡುತ್ತಲೇ ಇವೆ
ಪ್ರೀತಿ ಎಂದರೆ ಜೀವ ಕೊಡುವುದಲ್ಲ, ಜೀವ ಕೊಲ್ಲುವುದೂ ಅಲ್ಲ; ಜೊತೆಯಾಗಿ ಬದುಕುವುದನ್ನು ಕಲಿಸುವುದು. ಒಂದು ಕ್ಷಣದ ತಲೆಹರಟೆ, ವಿಪರೀತ ಆವೇಶ ಅಥವಾ “ನನಗೆ ಸಿಗದವಳು ಯಾರಿಗೂ ಸಿಗಬಾರದು” ಎನ್ನುವ ವಿಕೃತ ಮನೋಭಾವದಿಂದ ಸಾಧಿಸಿದ್ದಾದರೂ ಏನು?
ಒಬ್ಬ ನಿರಪರಾಧಿ ಯುವತಿಯ ಬದುಕು ಬಸ್ ನಿಲ್ದಾಣದ ರಕ್ತದ ಮಡುವಿನಲ್ಲಿ ಕೊನೆಯಾಯಿತು. ಆರೋಪಿ ಇಂದು ಸಮಾಜದ ಕಣ್ಣಿನಲ್ಲಿ ಕಟುಕನಾಗಿ, ಇಲಿಪಾಷಾಣ ಸೇವಿಸಿ ಸಾವಿನ ದವಡೆಯಲ್ಲಿ ನರಳುತ್ತಿದ್ದಾನೆ.ಒಂದು ವೇಳೆ ಆಕೆ ನಿನ್ನ ಪ್ರೀತಿಗೆ ಒಪ್ಪದಿದ್ದರೆ, ಅವಳ ಪಾಡಿಗೆ ಅವಳನ್ನು ಬಿಟ್ಟು ನಿನ್ನ ಬದುಕಿನಲ್ಲಿ ನೀನು ಯಶಸ್ವಿಯಾಗಿ ತೋರಿಸಿದ್ದರೆ ನೀನೊಬ್ಬ ಅದ್ಭುತ ಪ್ರೇಮಿಯಾಗಬಹುದಿತ್ತು. ಆದರೆ, ನಿರ್ದಯವಾಗಿ ಕೊಚ್ಚಿ ಕೊಂದ ಮೇಲೆ ಅಲ್ಲಿ ಪ್ರೀತಿಯೆಲ್ಲಿದೆ? ಅದು ಕೇವಲ ರಕ್ಕಸತನ!
ಒಂದು ಮಗುವನ್ನು ಹೆತ್ತು, ಸಾಕಿ, ಸಲಹಿ, ಅವರಿಗೊಂದು ಒಳ್ಳೆಯ ಭವಿಷ್ಯ ಕಲ್ಪಿಸಿಕೊಡಲು ಹೆತ್ತ ಕರುಳು ಪಡುವ ಪಾಡು ದೇವರಿಗೇ ಗೊತ್ತು.
21 ವರ್ಷಗಳ ಕಾಲ ಕಣ್ಣಿನ ರೆಪ್ಪೆಯಂತೆ ಬೆಳೆಸಿದ ಮಗಳು ಇನ್ನು ನೆನಪು ಮಾತ್ರ. ತಂದೆ-ತಾಯಿಯ ಆಸರೆಯಾಗಬೇಕಾಗಿದ್ದ ಮಗಳ ಶವವನ್ನು ನೋಡುವ ದೌರ್ಭಾಗ್ಯ ಆ ಪೋಷಕರಿಗೆ ಬಂತಲ್ಲಾ? ಅವರ ಆಕ್ರಂದನಕ್ಕೆ ಬೆಲೆ ಕಟ್ಟುವವರು ಯಾರು?
ಮಗ ತಪ್ಪು ಮಾಡಿರಬಹುದು, ಆದರೆ ಹೆತ್ತ ಕರುಳಿಗೆ ಮಗನ ಮೇಲಿನ ಮಮತೆ ಸಾಯುವುದಿಲ್ಲ. ಸಮಾಜದಲ್ಲಿ ತಲೆ ಎತ್ತಿ ನಡೆಯದಂತೆ ಮಾಡಿದ ಮಗನ ಕೃತ್ಯಕ್ಕೆ ಆ ವೃದ್ಧ ಪೋಷಕರು ದಿನವೂ ಸಾಯಬೇಕಾಗಿದೆ.
ಯುವಕ-ಯುವತಿಯರೇ, ನೆನಪಿರಲಿ. ನೀವು ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ ನಿಮ್ಮನ್ನು ಮಾತ್ರವಲ್ಲ, ನಿಮ್ಮನ್ನು ನಂಬಿದ ಹೆತ್ತವರನ್ನು ಜೀವಂತ ಸಮಾಧಿ ಮಾಡುತ್ತದೆ.
ಇಂದಿನ ಯುವ ಪೀಳಿಗೆಗೆ ಭಾವನೆಗಳ ಮೇಲೆ ಹಿಡಿತ ಕಮ್ಮಿಯಾಗುತ್ತಿದೆ. ಒಪ್ಪಿಗೆಯನ್ನು ಸ್ವೀಕರಿಸುವಷ್ಟೇ ಸಹಜವಾಗಿ ತಿರಸ್ಕಾರವನ್ನು ಕೂಡ ಸ್ವೀಕರಿಸುವುದನ್ನು ಕಲಿಯಬೇಕಿದೆ.
ಪ್ರೀತಿ ಎಂದರೆ ಒಡೆತನ ಸಾಧಿಸುವುದಲ್ಲ. ಒಬ್ಬ ಹುಡುಗಿ ನಿಮ್ಮನ್ನು ಬೇಡವೆಂದ ತಕ್ಷಣ ನಿಮ್ಮ ಪುರುಷತ್ವಕ್ಕೆ ಧಕ್ಕೆ ಬರುವುದಿಲ್ಲ. ಆಕೆಯ ನಿರ್ಧಾರವನ್ನು ಗೌರವಿಸುವುದು ನಿಜವಾದ ಗಂಡಸುತನ. ಪ್ರೀತಿಯಲ್ಲಿ ಸೋತರೆ ಬದುಕೇ ಮುಗಿಯುವುದಿಲ್ಲ, ಸಾಧಿಸಲು ಇಡೀ ಪ್ರಪಂಚವೇ ಮುಂದಿದೆ. ಕಟುಕನಾಗಿ ಜೈಲು ಪಾಲಾಗುವ ಬದಲು, ಸಾಧಕನಾಗಿ ಬದುಕಿ ತೋರಿಸಬೇಕು.
ಯುವತಿಯರೆ ಸಮಾಜದಲ್ಲಿ ಎಲ್ಲರನ್ನೂ ಅಷ್ಟು ಸುಲಭವಾಗಿ ನಂಬಬೇಡಿ. ಯಾರಾದರೂ ಅತಿಯಾಗಿ ಬೆನ್ನತ್ತುತ್ತಿದ್ದರೆ, ಮಾನಸಿಕ ಕಿರುಕುಳ ನೀಡುತ್ತಿದ್ದರೆ ಅದನ್ನು ಆರಂಭದಲ್ಲೇ ಪೋಷಕರ ಗಮನಕ್ಕೆ ತನ್ನಿ ಅಥವಾ ಕಾನೂನಿನ ನೆರವು ಪಡೆಯಿರಿ. ನಿಮ್ಮ ಸುರಕ್ಷತೆ ನಿಮ್ಮ ಮೊದಲ ಆದ್ಯತೆಯಾಗಿರಲಿ.
ಕಣ್ಣೆದುರೇ ಎರಡು ಯುವ ಬದುಕುಗಳು ಹೀಗೆ ಹಾರಿಹೋದಾಗ, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಭಯ ಕಾಡುತ್ತದೆ. ಸೋಲನ್ನು ಒಪ್ಪಿಕೊಳ್ಳಲಾಗದ, ಭಾವನೆಗಳನ್ನು ನಿಯಂತ್ರಿಸಲಾಗದ ಇಂದಿನ ಯುವಮನಸ್ಸುಗಳ ದಾರಿ ತಪ್ಪುತ್ತಿರುವುದಕ್ಕೆ ನಾವೆಲ್ಲೋ ಸಾಕ್ಷಿಯಾಗುತ್ತಿದ್ದೇವಾ? ಪ್ರೀತಿಯ ಹೆಸರಿನಲ್ಲಿ ನಡೆಯುವ ಈ ರಕ್ಕಸತನಕ್ಕೆ ಕೊನೆ ಎಂದು?
ಪ್ರೀತಿ ಪವಿತ್ರವಾದದ್ದು. ಅದಕ್ಕೆ ರಕ್ತದ ಕಲೆ ಹಚ್ಚಬೇಡಿ. ಪ್ರೀತಿಯ ಹೆಸರಿನಲ್ಲಿ ಇಂತಹ ಕ್ರೂರ ಘಟನೆಗಳು ಮರುಕಳಿಸದಿರಲಿ. ಲಾವಣ್ಯಳ ಆತ್ಮಕ್ಕೆ ಶಾಂತಿ ಸಿಗಲಿ, ಆಕೆಯ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ
