
ಕಳಸ ಲೈವ್ ವರದಿ
ಕರ್ನಾಟಕದ ಗ್ರಾಮೀಣ ಸೊಗಡು ಮತ್ತು ಸಾಂಪ್ರದಾಯಿಕ ಕಲೆಗಳನ್ನು ಜೀವಂತವಾಗಿಟ್ಟಿರುವ ಜಾನಪದ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಪ್ರೊ. ಚಿ. ಬೋರಲಿಂಗಯ್ಯ ಅವರು ಕಳಸ ತಾಲ್ಲೂಕಿಗೆ ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ರಾಜ್ಯ ಅಧ್ಯಕ್ಷರನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು, ಆತ್ಮೀಯವಾಗಿ ಗೌರವಿಸಲಾಯಿತು.
ತಮ್ಮ ಪ್ರವಾಸದ ಭಾಗವಾಗಿ ರಾಜ್ಯ ಅಧ್ಯಕ್ಷರು ಕಳಸದ ಪ್ರಸಿದ್ಧ ಕರಟದ ಚಿಪ್ಪಿನ ಹಸ್ತಕಲಾ ಕಲಾವಿದರಾದ ಪೂರ್ಣಚಂದ್ರ ಹೆಬ್ಬಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಪ್ರಕೃತಿಯ ತ್ಯಾಜ್ಯದಲ್ಲೂ ಅದ್ಭುತ ಕಲಾಕೃತಿಗಳನ್ನು ಅರಳಿಸುವ ಹೆಬ್ಬಾರ್ ಅವರ ಕರಕುಶಲ ಕಲಾ ನೈಪುಣ್ಯತೆಯನ್ನು ಪ್ರೊ. ಚಿ. ಬೋರಲಿಂಗಯ್ಯ ಅವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪರಿಷತ್ತಿನ ವತಿಯಿಂದ ಸಾಧಕ ಕಲಾವಿದರನ್ನು ಸಾಂಪ್ರದಾಯಿಕವಾಗಿ ಗೌರವಿಸಿ, ಪ್ರೋತ್ಸಾಹಿಸಲಾಯಿತು.
ಇದೇ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಐತಿಹಾಸಿಕ ಹಿನ್ನೆಲೆ, ಅದರ ಮಹತ್ವ ಹಾಗೂ ಕಳಸ ಮತ್ತು ಮಲೆನಾಡು ಭಾಗದ ವಿಶಿಷ್ಟ ಸ್ಥಳೀಯ ಜಾನಪದ ಕಲೆಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಯಿತು. ಆಧುನಿಕತೆಯ ಅಬ್ಬರದ ನಡುವೆಯೂ ಗ್ರಾಮೀಣ ಭಾಗದ ವಿಶಿಷ್ಟ ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪರಿಷತ್ತು ವಹಿಸಬೇಕಾದ ಪಾತ್ರದ ಕುರಿತು ಹಿರಿಯರು ಬೆಳಕು ಚೆಲ್ಲಿದರು.
ನಂತರ ಕಳಸದ ಪ್ರಮುಖ ಕಲಾ ಪೋಷಕರಾದ ಕೆ. ಕೆ. ಬಾಲಕೃಷ್ಣ ಭಟ್ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜ್ಯಧ್ಯಕ್ಷರು, ಪರಿಷತ್ತಿನ ಮುಂದಿನ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು. ಜಾನಪದ ಪರಿಷತ್ತನ್ನು ಸಂಘಟನಾತ್ಮಕವಾಗಿ ಹೇಗೆ ಮುನ್ನಡೆಸಬೇಕು, ಗ್ರಾಮೀಣ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳೇನು ಎಂಬ ಬಗ್ಗೆ ಗಹನವಾದ ಚರ್ಚೆ ನಡೆಯಿತು.
ಇದೇ ಸಂದರ್ಭದಲ್ಲಿ ಕೆ. ಕೆ. ಬಾಲಕೃಷ್ಣ ಭಟ್ ಅವರು ರಾಜ್ಯ ಅಧ್ಯಕ್ಷರಾದ ಪ್ರೊ. ಚಿ. ಬೋರಲಿಂಗಯ್ಯ ಅವರನ್ನು ಅತ್ಯಂತ ಆತ್ಮೀಯವಾಗಿ ಸತ್ಕರಿಸಿ, ಗೌರವ ಸಮರ್ಪಿಸಿದರು.
ಈ ಸಾಂಸ್ಕೃತಿಕ ಭೇಟಿಯು ಕಳಸ ತಾಲ್ಲೂಕಿನ ಜಾನಪದ ಲೋಕಕ್ಕೆ ಹೊಸ ಚೈತನ್ಯ ನೀಡಿದ್ದು, ಮುಂದಿನ ದಿನಗಳಲ್ಲಿ ಕಳಸ ಭಾಗದಲ್ಲಿ ಮತ್ತಷ್ಟು ಜಾನಪದ ಆಚರಣೆ ಹಾಗೂ ಸಂಶೋಧನೆಗಳಿಗೆ ಇದು ಮುನ್ನುಡಿ ಬರೆಯಲಿದೆ ಎಂದು ಕಾಜಪ ಅಧ್ಯಕ್ಷ ರಜಿತ್ ಕೆಳಗೂರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
