ಕಳಸ ಲೈವ್ ವರದಿ
ಕಳಸದ ಧಾರ್ಮಿಕ, ರಾಜಕೀಯ, ಕ್ರೀಡಾ ಮತ್ತು ಸಾಂಸ್ಕøತಿಕ ಇತಿಹಾಸದಲ್ಲಿ ಅಪಾರ ಸೇವೆ ಸಲ್ಲಿಸಿ ಮರೆಯಲಾರದಂತಹ ಛಾಪು ಒತ್ತಿ ಅನಿರೀಕ್ಷಿತವಾಗಿ ಎಲ್ಲರನ್ನೂ ಅಗಲಿ ಮರೆಯಾದ ದಿ. ಎನ್.ಎಂ.ಹರ್ಷ ಅವರ ಹೆಸರನ್ನು ಕಳಸದ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಇಡುವಂತೆ ಕಳಸ ಯುವಕ ಸಂಘದ ವತಿಯಿಂದ ಕಳಸ ಗ್ರಾಮ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ತಮ್ಮ ಜೀವಿತಾವಧಿಯಲ್ಲಿ ಕಳಸದ ಎಲ್ಲ ಆಗುಹೋಗುಗಳಲ್ಲಿ ಪ್ರಾಮಾಣಿಕವಾಗಿ, ನಿಸ್ವಾರ್ಥತೆಯಿಂದ ಅವರು ಸಕ್ರಿಯವಾಗಿ ಪಾಲುದಾರಿಕೆ ತೋರುತ್ತಿದ್ದರು. ಕಳಸ ಯುವಕ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಕಳಸದಲ್ಲಿ ಹಲವಾರು ಸಮಾಜಮುಖಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದವರು. ಅನೇಕ ಆರೋಗ್ಯ ಶಿಬಿರ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಪಂದ್ಯಾವಳಿಗಳು, ಯುವಜನ ಮೇಳಗಳನ್ನು ಕಳಸದ ಯುವಕರನ್ನು ಸಂಘಟಿಸಿ, ಆಯೋಜಿಸಿ ಯಶಸ್ವಿ, ಆದವರು ಎನ್.ಎಂ.ಹರ್ಷ. ಕಳಸದ ಹೊಸದೇವರ ಚಾವಡಿ ಧರ್ಮದರ್ಶಿಗಳಾಗಿ ಅವರು ಧಾರ್ಮಿಕ ಕಟ್ಟು ಕಟ್ಟಳೆಗಳನ್ನು ಚಾಚೂತಪ್ಪದೆ ನಿರ್ವಹಿಸಿ ಅಸಂಖ್ಯ ಭಕ್ತರ ಪಾಲಿಗೆ ಅಚ್ಚುಮೆಚ್ಚಿನ ಮಾರ್ಗದರ್ಶಕರೂ ಆಗಿದ್ದರು.

ರೋಟರಿ ಕ್ಲಬ್ ಪದಾಧಿಕಾರಿಗಳಾಗಿ ಅವರು ಅನೇಕ ಸಮಾಜಮುಖಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಕಳಸೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಲ್ಲಿನ ಆಗುಹೋಗುಗಳ ಬಗ್ಗೆ ಮತ್ತು ಅಭಿವೃದ್ಧಿ ಬಗ್ಗೆ ಅಪಾರ ಶ್ರಮ ವಹಿಸಿದ್ದರು. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಬಹಳ ಶ್ರಮವಹಿಸಿ ಕಳಸವು ಪ್ರವಾಸೋದ್ಯಮದ ನಕಾಶೆಯಲ್ಲಿ ಹೆಸರು ಗುರುತಿಸಿಕೊಳ್ಳಲು ಕಾರಣರಾಗಿದ್ದರು. ಅವರ ಅಕಾಲಿಕ ನಿಧನದ ನಂತರ ಕಳಸವು ಒಬ್ಬ ಸಕಲಕಲಾವಲ್ಲಭನನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸುತ್ತಿದೆ. ಅವರ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ಇರಬೇಕು ಎಂಬುದು ಬಹುತೇಕ ಸ್ಥಳೀಯರ ಅಭಿಪ್ರಾಯ ಆಗಿದೆ.

ಪದವಿಪೂರ್ವ ಕಾಲೇಜಿನ ಕ್ರೀಡಾಂಗಣವನ್ನು 3 ದಶಕದ ಹಿಂದೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಹಿರಿಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ನಿರ್ಮಾಣ ಮಾಡಿಸುವದರಲ್ಲಿ ಹರ್ಷ ಅವರ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಆ ಕ್ರೀಡಾಂಗಣಕ್ಕೆ ದಿ.ಎನ್.ಎಂ.ಹರ್ಷ ಅವರ ಹೆಸರನ್ನೇ ಇರಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ತ್ರವನ್ನು ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ಅವರಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಕಳಸ ಗ್ರಾ.ಪಂ ಉಪಾಧ್ಯಕ್ಷ ರಂಗನಾಥ್, ಸದಸ್ಯ ಸಂತೋಷ್ ಹಿನಾರಿ, ಎನ್.ಎಂ ಹರ್ಷ ಅವರ ತಾಯಿ ಚಂಪಾ ಎಂ ರಾವ್, ಕಳಸ ಯುವಕ ಸಂಘದ ಸದಸ್ಯರುಗಳಾದ ರವಿ ಕೆಳಂಗಡಿ, ವೀರೇಂದ್ರ ಜೈನ್, ಟಿ.ಅಶೋಕ್, ಸತ್ಯೇಂದ್ರ ಜೈನ್ , ತೋಮಸ್, ಮೋಹನ್ ಬಂಡಾರಿ, ಲಕ್ಷ್ಮೀಶ್ ಇತರರು ಇದ್ದರು.
